ಜ್ಞಾನಶಾಖೆ

	ಇಂಗ್ಲೀಷಿನ ಫ್ಯಾಕಲ್ಟಿ ಎಂಬುದಕ್ಕೆ ಸಂವಾದಿಯಾದ ಪದ. ಮನಶ್ಯಾಸ್ತ್ರ ಇತಿಹಾಸದ ಮೊದಮೊದಲು ಫ್ಯಾಕಲ್ಟಿ ಎಂಬ ಪಾರಿಭಾಷಿಕವನ್ನು ಸ್ಮøತಿಶಕ್ತಿ, ಕಲ್ಪನಾಶಕ್ತಿ, ಸಂಬಂಧಕಲ್ಪನೆ, ಆಲೋಚನೆ ಮುಂತಾದ ಮನಶ್ಯಕ್ತಿಗಳಿಗೆ ಬಳಸಲಾಗುತ್ತಿತ್ತು. ಈಗ ವಿಶ್ವವಿದ್ಯಾಲಯಗಳಲ್ಲಿ ಬೋಧಿಸುವ ಒಂದೊಂದು ವಿಷಯ ವಿಭಾಗ ಅಥವಾ ಜ್ಞಾನಶಾಖೆ ಅಥವಾ ಒಂದು ವಿಶಿಷ್ಟ ಅಧ್ಯಯನ ವಿಭಾಗದ ಅಧ್ಯಾಪಕವರ್ಗ ಎಂಬ ಅರ್ಥದಲ್ಲಿ ಅದನ್ನು ಬಳಸುವುದು ವಾಡಿಕೆಗೆ ಬಂದಿದೆ. ಕೆಲವು ವೇಳೆ ಒಂದು ಶಿಕ್ಷಣಸಂಸ್ಥೆಯನ್ನು ಇಡೀ ಅಧ್ಯಾಪಕವರ್ಗಕ್ಕೂ ಅದೇ ಹೆಸರುಂಟು.

	ಕಲಾಶಾಸ್ತ್ರ, ವಿಜ್ಞಾನಶಾಸ್ತ್ರ, ವೈದ್ಯಶಾಸ್ತ್ರ, ಶಿಲ್ಪಶಾಸ್ತ್ರ, ನ್ಯಾಯಶಾಸ್ತ್ರ, ಕೃಷಿವಿಜ್ಞಾನ, ವಾಣಿಜ್ಯಶಾಸ್ತ್ರ ಮತ್ತು ಶಿಕ್ಷಣಶಾಸ್ತ್ರ - ಇವು ವಿಶ್ವವಿದ್ಯಾಲಯದ ಪ್ರಮುಖ ಜ್ಞಾನಶಾಖೆಗಳು (ವಿದ್ವತ್ಪರಿಷತ್ತು). ಇವು ವಿಶಾಲವಾದ ಜ್ಞಾನಶಾಖೆಗಳಾಗಿದ್ದು ಒಂದೊಂದು ಹಲವು ವಿಷಯ ವಿಭಾಗ ಅಥವಾ ಅಧ್ಯಯನ ವಿಷಯಗಳನ್ನೊಳಗೊಂಡಿರುತ್ತದೆ, ಉದಾ: ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತಶಾಸ್ತ್ರ, ಸಸ್ಯಶಾಸ್ತ್ರ ಮುಂತಾದವನ್ನು ವಿಜ್ಞಾನಶಾಖೆ ಒಳಗೊಂಡಿರುತ್ತದೆ. ಕಲಾಶಾಸ್ತ್ರಶಾಖೆಯಾದರೋ ಭಾಷೆಗಳು, ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ ಮುಂತಾದವನ್ನೊಳಗೊಂಡಿರುತ್ತದೆ. ಇಲ್ಲಿನ ಪ್ರತಿ ವಿಷಯ ವಿಭಾಗವೂ ಆಯಾ ವಿಷಯದ ಬೋಧನೆ ಮತ್ತು ಪರೀಕ್ಷೆಗೆ ಸಂಬಂಧಿಸಿದ ಸಮಸ್ಯೆಗಳ ಪರಿಶೀಲನೆಗಾಗಿ ಒಂದೊಂದು ಪಠ್ಯಪರಿಷತ್ತನ್ನು (ಅದನ್ನೂ ಫ್ಯಾಕಲ್ಟಿ ಎನ್ನುತ್ತಾರೆ) ಹೊಂದಿರುತ್ತದೆ. ಒಂದೊಂದು ಜ್ಞಾನಶಾಖೆ ವಿಭಾಗಗಳ ಅಧ್ಯಯನ ಮೋಡಲಿಗಳ ಕೆಲವು ಸದಸ್ಯರನ್ನೂ ಶಿಕ್ಷಣ ಮಂಡಳಿಯ (ಅಕೆಡಮಿಕ್ ಕೌನ್ಸಿಲ್) ಕೆಲವು ಸದಸ್ಯರನ್ನೂ ಕೆಲವು ವಿಶೇಷಜ್ಞರನ್ನೂ ಒಳಗೊಂಡಿರುತ್ತದೆ. ವಿಶ್ವವಿದ್ಯಾಲಯದ ವಿದ್ಯಾಪ್ರಾಧಿಕಾರದ ಶ್ರೇಣಿಯಲ್ಲಿ ಈ ಪಠ್ಯಪರಿಷತ್ತು ಅಧ್ಯಯನ ಮಂಡಲಿಗೂ (ಬೋರ್ಡ್ ಆಫ್ ಸ್ಟಡೀಸ್) ಶಿಕ್ಷಣ ಮಂಡಳಿಗೂ ಮಧ್ಯದ ಸ್ಥಾನವನ್ನು ಹೊಂದಿರುತ್ತದೆ. ಒಂದಕ್ಕಿಂತ ಹೆಚ್ಚು ವಿಷಯ ವಿಭಾಗಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಇದು ಪರಿಶೀಲಿಸಿ ತೀರ್ಮಾನವನ್ನು ವಿದ್ವತ್ಪರಿಷತ್ತಿನ ಮುಂದೆ ಇಡುತ್ತದೆ. ಇದು ವಿಶ್ವವಿದ್ಯಾಲಯದಲ್ಲಿ ವಿದ್ಯಾವಿಷಯಗಳ ಬಗ್ಗೆ ತೀರ್ಮಾನ ಕೈಕೊಳ್ಳುವ ಪರಮಾಧಿಕಾರ ಹೊಂದಿರುವ ಸಂಸ್ಥೆ. ಪ್ರತಿ ಜ್ಞಾನಮಂಡಲಿಗೂ ಒಬ್ಬೊಬ್ಬ ಡೀನ್ ಅಧ್ಯಕ್ಷನಾಗುತ್ತಾನೆ. ಡೀನರನ್ನು ಕೆಲವು ಕಡೆ ಆ ಜ್ಞಾನಮಂಡಲಿಯಲ್ಲಿರುವ ವಿಷಯ ವಿಭಾಗಗಳ ಮುಖ್ಯಸ್ಥರನ್ನು ಪರ್ಯಾಯ ಕ್ರಮದ ತತ್ತ್ವವನ್ನನುಸರಿಸಿ ನೇಮಕ ಮಾಡಲಾಗುವುದು. ಜ್ಞಾನಮಂಡಲಿಯ ಸಭೆಗಳಲ್ಲಿ ಅಧ್ಯಕ್ಷತೆ ವಹಿಸುವುದರ ಜೊತೆಗೆ ಡೀನರು ಘಟಿಕೋತ್ಸವದಲ್ಲಿ ಪದವೀದಾನ ಮಾಡುವಾಗ ತಮ್ಮ ತಮ್ಮ ಜ್ಞಾನಶಾಖೆಯ ಅಭ್ಯರ್ಥಿಗಳನ್ನು ಸೂಚಿಸುವ ಕರ್ತವ್ಯವನ್ನೂ ನಿರ್ವಹಿಸಬೇಕಾಗುತ್ತದೆ.										 (ಎ.ಸಿ.ಡಿ.)
	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ